ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ.
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.
ಬಡಪಶು ಪಂಕದಲ್ಲಿ ಬಿದ್ದರೆ ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ? ಶಿವ ಶಿವಾ! ಹೋದಹೆ ಹೋದಹೆನಯ್ಯ! ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ ಪಶುವಾನು ಪಶುಪತಿ ನೀನು ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ ಒಡೆಯ ನಿಮ್ಮ ಬಯ್ಯದಂತೆ ಮಾಡು ಕೂಡಲಸಂಗಮದೇವ
ಮತಿಮಂದನಾಗಿ ಗತಿಯ ಕಾಣದೆ ಇದ್ದೆನಯ್ಯಾ
ಹುಟ್ಟುಗುರುಡನ ಕೈಯ ಕೋಲ ಕೊಟ್ಟು ನಡೆಸುವಂತೆ ನಡೆಸಯ್ಯಾ ಎನ್ನ ನಿಮ್ಮ ಅಚ್ಚ ಶರಣರ ಒಕ್ಕುದ ಮಿಕ್ಕುದ ನಚ್ಚಿಸು ಮಚ್ಚಿಸು ಕೂಡಲಸಂಗಮದೇವಾ